ಪಾಂಡವಪುರದಲ್ಲಿ ವಿಶ್ವ ಮಣ್ಣು ದಿನಾಚರಣೆ ವರದಿ


ಅಂತರರಾಷ್ಟ್ರೀಯ ಮಣ್ಣಿನ ವರ್ಷವಾಗಿ ಆಚರಿಸಲಾಗುತ್ತಿರುವ 2015ನೆಯ ಸಾಲಿನ ವಿಶ್ವ ಮಣ್ಣು ದಿನಾಚರಾಣೆಯನ್ನು ಶನಿವಾರ 05.12.2015 ರಂದು ತಾಂಡವಪುರದ ರೇಷ್ಮೆ ಇಲಾಖೆಯ ಅವರಣದಲ್ಲಿ ಕೃಷಿ ಇಲಾಖೆ, ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಅಧ್ಯಾಯ ಹಾಗೂ ಫ್ಯಾಕ್ಟ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ಸುಮಾರು 260 ರೈತರು ಭಾಗವಹಿಸಿದ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ. ಮಹಂತೇಶಪ್ಪನವರು ಉದ್ಘಾಟಿಸಿ ಜಿಲ್ಲೆಯಲ್ಲಿ ಮುಂದಿನ ಎರಡು ವರ್ಷಗಳ ಕಾಲ ಇಲಾಖೆಯಿಂದ ನಡೆಸಲಾಗುವ ಮಣ್ಣು ಆರೋಗ್ಯ ಅಭಿಯಾನಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಜಿಲ್ಲೆಯಲ್ಲಿ 3.85 ಲಕ್ಷಕ್ಕೂ ಅಧಿಕ ಹಿಡುವಳಿಗಳಿದ್ದು ಇಲಾಖೆಯ 10 ಹೆಕ್ಟರ್ ಒಣಭೂಮಿ ಅಥವಾ 2.5 ಹೆಕ್ಟರ್ ನೀರಾವರಿ ಜಮೀನಿನ ಘಟಕವನ್ನು ಒಂದು ಗ್ರಿಡ್ ಎಂದು ಪರಿಗಣಿಸಿ, ಸುಮಾರು 83,000 ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಿ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗುವುದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೆವಿಕೆಯಿಂದ ಚಿಕ್ಕಯ್ಯನಛತ್ರ ಹೋಬಳಿಯ ಎಸ್. ಹೊಸಕೋಟೆ ಗ್ರಾಮದಿಂದ ಸಂಗ್ರಹಿಸಲಾದ ಮಣ್ಣು ಮಾದರಿಗಳನ್ನು ಪರೀಕ್ಷಿಸಿ ಒಟ್ಟು 255 ರೈತರಿಗೆ ಮಣ್ಣು ಆರೋಗ್ಯ ಪತ್ರಗಳನ್ನು ವಿತರಿಸಲಾಯಿತು. ಪರೀಕ್ಷೆ ಕೈಗೊಂಡ ಕೆವಿಕೆಯ ಮಣ್ಣು ವಿಜ್ಞಾನಿ ಜೆ.ಜಿ. ರಾಜಣ್ಣನವರು ಮಣ್ಣಿನ ಆರೋಗ್ಯ ಕಾಪಾಡಲು ಅಮೂಲ್ಯ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೆವಿಕೆಯ ಮುಖ್ಯಸ್ಥರಾದ ಅರುಣ್ ಬಳಮಟ್ಟಿಯವರು ಮಣ್ಣಿಗಾಗಿ ವರ್ಷಾಚರಣೆ ಹಾಗೂ ಅಂತರಾಷ್ಟ್ರೀಯ ದಿನಾಚರಣೆ ಆಚರಿಸುವ ಹಿಂದಿರುವ ಮಣ್ಣಿನ ಮಹತ್ವ ಹಾಗೂ ಮಣ್ಣಿನ ನಿರಂತರ ಶೋಷಣೆ ಕುರಿತು ಮಾತನಾಡುತ್ತಾ ಕೃಷಿಗೆ ಮಣ್ಣೇಣ ಮೂಲಾಧಾರ, ಪ್ರಪಂಚದ ಶೇ. 25ರಷ್ಟು ಜೀವವೈವಿಧ್ಯಕವಿರುವುದೇ ಮಣ್ಣಿನಲ್ಲಿ, ಆದ್ದರಿಂದ ಮಣ್ಣಿನ ಸೂಕ್ತ ಬಳಕೆಯೊಂದಿಗೆ ಅದರ ಸಂರಕ್ಷಣೆಯೂ ನಮ್ಮ ಜವಾಬ್ದಾರಿಯಾಗಬೇಕೆಂದು ಕರೆ ನೀಡಿದರು. ನಂಜನಗೂಡು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶಿವರಾಮೇಗೌಡ ಸ್ವಾಗತಿಸಿದರು, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಅಧ್ಯಾಯದ ಕಾರ್ಯದರ್ಶಿ ಮೋಹನಗೌಡ ವಂದಿಸಿದರು, ನಾಗೇಂದ್ರ ನಿರೂಪಿಸಿದರು.

ಕಾರ್ಯಕ್ರಮದ ಚಿತ್ರಗಳು